ದೀಪವಂಶ

ದೀಪವಂಶ (ಅಂದರೆ ದ್ವೀಪ ವೃತ್ತಾಂತ) ಎಂಬುದು ಪಾಳಿ ಭಾಷೆಯಲ್ಲಿರುವ ಸಿಂಹಳದ ಅತ್ಯಂತ ಪ್ರಾಚೀನ ಇತಿಹಾಸ.  ಪಾಳಿ ಸಾಹಿತ್ಯದ ಒಂದು ವೈಶಿಷ್ಟ್ಯವಾಗಿರುವ ವಂಶಗಳನ್ನು ಜಗತ್ತಿನಲ್ಲಿ ಅತ್ಯಂತ ಪ್ರಾಚೀನ ಐತಿಹಾಸಿಕ ದಾಖಲೆಗಳು ಎಂದು ಹೇಳಲಾಗಿದೆ.  ಇವು ಸುಂದರ ಕಾವ್ಯಗಳ ರೂಪದಲ್ಲಿದ್ದು ನೈತಿಕ ಉದ್ದೇಶವನ್ನು ಹೊಂದಿವೆ.  ಈ ವರ್ಗದ ಸಾಹಿತ್ಯಿಕ ರಚನೆಗಳೊಡನೆ ಹೋಲಿಸಬಹುದಾದಂಥ ಕೃತಿಗಳು ಬೇರಾವುದೇ ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ ಇಲ್ಲ.  ಶೈಲಿ ಮತ್ತು ಸ್ವರೂಪಗಳಲ್ಲಿ ಇವು ಇತಿಹಾಸ ಮತ್ತು ಪುರಾಣಗಳನ್ನು ಹೋಲುತ್ತದೆಯಾದರೂ ಇವು ಪೂರ್ಣ ಪುರಾಣಗಳಾಗಲೀ ಐತಿಹ್ಯಗಳಾಗಲೀ ಅಲ್ಲ.

ಸುಪ್ರಸಿದ್ಧ ಪ್ರಾಚ್ಯಶಾಸ್ತ್ರಜ್ಞ ರೀಸ್ ಡೇವಿಡ್ಸ್‍ನ ಪ್ರಕಾರ ಸಿಂಹಳದ ವೃತ್ತಾಂತಗಳು ತೀರ ಅನಂತರದ ದಿನಗಳಲ್ಲಿ ರಚಿತವಾದ ಇಂಗ್ಲೆಂಡಿನ ಅಥವಾ ಫ್ರಾನ್ಸಿನ ಇಂಥ ವೃತ್ತಾಂತಗಳಿಗಿಂತ ಕಡಿಮೆ ಪ್ರಮಾಣಭೂತವಾದುದೇನೂ ಅಲ್ಲ.  ಭಾರತೀಯ ಇತಿಹಾಸದ ಅನೇಕ ಘಟನೆಗಳಿಗೆ ಮತ್ತು ಕಾಲಗಳಿಗೆ ಎರಡೂ ರಾಷ್ಟ್ರಗಳ ನಡುವೆ ನಡೆದ ಮಿನಿಮಯಗಳಿಗೆ ಧಾರ್ಮಿಕ ಪಂಥಗಳು ಮತ್ತು ಸಂಪ್ರದಾಯಗಳಿಗೆ ಸಾಂಸ್ಕøತಿಕ ಕೇಂದ್ರಗಳು ಮತ್ತು ಆ ಕಾಲದಲ್ಲಿ ಇದ್ದ ಸಾಮಾಜಿಕ ನಡವಳಿಕೆಗಳಿಗೆ ಸಂಬಂಧಿಸಿದಂತೆ ತಾರ್ಕಣೆಯನ್ನೊದಗಿಸುವುದರಿಂದಲೂ ಸಮಕಾಲೀನ ಖಂಡಾಂತರ ಭಾರತದ ಭೂಗೋಳಿಕ ಪರಿಸ್ಥಿಯ ಬಗ್ಗೆ ಸಮೃದ್ಧ ಮಾಹಿತಿಯನ್ನೊದಗಿಸುವುದರಿಂದಲೂ  ಭಾರತೀಯ ಇತಿಹಾಸದ ದೃಷ್ಟಿಯಿಂದ ಈ ವೃತ್ತಾಂತಗಳ ವಿಶೇಷ ಪ್ರಾಮುಖ್ಯ ಗಳಿಸಿವೆ.

ವಂಶಸಾಹಿತ್ಯದಲ್ಲಿ 12 ಪ್ರಮುಖ ಕೃತಿಗಳಿವೆ. ಇವುಗಳಲ್ಲಿ ದೀಪವಂಶವೇ ಅತ್ಯಂತ ಪ್ರಾಚೀನವಾದುದು.  ಮಹಾನ್ ಬೌದ್ಧ ವಿದ್ವಾಂಸನೂ ಪಾಳೀ ಪವಿತ್ರ ಗ್ರಂಥಗಳ ವಾಖ್ಯಾಕಾರನೂ  ಕ್ರಿ. ಶ. 5  ನೆಯ ಶತಮಾನದಲ್ಲಿ ಸಿಂಹಳಕ್ಕೆ ಭೇಟಿಕೊಟ್ಟವನೂ ಆದ ಆಚಾರ್ಯ ಬುದ್ಧಘೋಷ ಹಿಂದಿನ ಎಲ್ಲ ಭಾರತ-ಸಿಂಹಳಿಗಳ ಸಂಬಂಧದ ಬಗೆಗೆ ದೀಪವಂಶವನ್ನು ಐತಿಹಾಸಿಕ ಆಕರ ಗ್ರಂಥವಾಗಿ ಉದ್ಧರಿಸಿದ್ದಾನೆ.  ಈ ಕೃತಿಗಳಲ್ಲಿ ಕೃತಿಕಾರನ ಹೆಸರು ಹೇಳಿಲ್ಲ; ಅನೇಕ ತಲೆಮಾರುಗಳಲ್ಲಿ ವಿದ್ವಾಂಸರಾದ ಬೌದ್ಧ - ಭಿಕ್ಷುಗಳು ಬಹುಶ: ಕ್ರಿ. ಶ. 4 ನೆಯ ಶತಮಾನದ ವರೆಗೆ ಇದನ್ನು ರಚಿಸಿದ್ದಾರೆ.  ಏಕೆಂದರೆ, ಅತ್ಯಂತ ಪ್ರಾಚೀನ ಕಾಲದಿಂದ ಹಿಡಿದು ಮಹಾಸೇನನ ಆಳ್ವಿಕೆಯ ವರೆಗಿನ - ಅಂದರೆ, ಕ್ರಿ. ಶ. 325 ರಿಂದ 352 ರ ವರೆಗಿನ - ಸಿಂಹಳದ ಇತಿಹಾಸವನ್ನು ಇದರಲ್ಲಿ ಕೊಡಲಾಗಿದೆ. 

ಮಹಾಟ್ಮಕಥ, ಮಹಪಚ್ಚರೀ, ಕುರುಂದಿ, ಚುಲ್ಲಪಚ್ಚರಿ, ಅಂಧಟ್ಠ ಕಥಾ ಇವೇ ಮೊದಲಾದ ಪ್ರಾಚೀನ ವ್ಯಾಖ್ಯಾನಗಳಲ್ಲಿ ಅಡಕಗೊಂಡಿರುವ ಐತಿಹಾಸಿಕ ಸಂಪ್ರದಾಯಗಳ ಆಧಾರದ ಮೇಲೆ ದೀಪವಂಶ ರಚಿತವಾಗಿವೆ.  ಆ ಕಾಲದಲ್ಲಿ ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕøತಿಕ ಪರಂಪರೆಯ ಕೇಂದ್ರಬಿಂದುವಾಗಿದ್ದು ಬೌದ್ಧ ಧರ್ಮವನ್ನು ಸಿಂಹಳಕ್ಕೆ ಕೊಂಡೊಯ್ದು, ಯಕ್ಷದೀಪ ಅಂದರೆ ಅಸುರರ ದ್ವೀಪವಾಗಿದ್ದ ಸಿಂಗಳವನ್ನು ಧರ್ಮದೀಪವಾಗಿ ಪರಿವರ್ತಿಸಿದ ಚಕ್ರವರ್ತಿ ಅಶೋಕನ ಮಗ ಅರ್ಹತಮಹಿಂದನಿಂದ ಇವು ಮೂಲತ: ಕೈಸಾರಿದಂಥವು.

ಪ್ರಾಚೀನ, ಮೌಲಿಕ, ಸಾಮಗ್ರಿಯನ್ನು ಸಂರಕ್ಷಿಸಿಕೊಂಡು ಬಂದಿರುವುದರಿಂದ ಸಿಂಹಳದಲ್ಲಿ ಇದನ್ನು ಎಂದಿನಿಂದಲೂ ಗೌರವದಿಂದ ನೋಡಿಕೊಂಡು ಬರಲಾಗಿದೆ.  ಧಾತುಸೇನನೆಂಬ ಸಿಂಹಳದ ರಾಜನೊಬ್ಬ ಈ ಕೃತಿಯ ಸಮ್ಮಾನಾರ್ಥವಾಗಿ ಪ್ರತಿವರ್ಷವೂ ಸಮಸ್ತ ರಾಜವೈಭವದಿಂದ ಕೂಡಿದ ಸಮಾರಂಭವೊಂದನ್ನು ಏರ್ಪಡಿಸುತ್ತಿದ್ದ.

ಬುದ್ಧನ ವಂಶವೃಕ್ಷದೊಂದಿಗೆ ಹಾಗೂ ಸಿಂಗಳಕ್ಕೆ ಆತ ಮೂರುಬಾರಿ ಭೇಟಿಕೊಟ್ಟಿದರ ಬಗೆಗಿನ ಉಲ್ಲೇಖನದೊಂದಿಗೆ ದೀಪವಂಶ ಪ್ರಾರಂಭವಾಗುತ್ತದೆ. ಅನಂತರ ಇದು ಮೊದಲ ಮೂರು ಬೌದ್ಧ ಧಾರ್ಮಿಕ ಪರಿಷತ್ತುಗಳ ವರ್ಣನೆಯನ್ನು ಮುಂದಿರಿಸುತ್ತದೆ.  ಇವನ್ನು ಸಂಗೀತಿಗಳೆಂದು ಕರೆಯಲಾಗಿದೆ.  ಈ ಸಂದರ್ಭದಲ್ಲಿಯೇ ಸಮಸ್ತ ಬೋಧನೆಯನ್ನೂ ಪುನರುಚ್ಚರಿಸಲಾಯಿತು ಹಾಗೂ ತ್ರಿಪಿಟಕದ ರೂಪದಲ್ಲಿ ಅವನ್ನು ಸಕ್ರಮೀಕರಿಸಲಾಯಿತು.  ಬೌದ್ಧರ ಧರ್ಮ ಗ್ರಂಥವಾದ ಇದು ತನ್ನ ಹಿಂದಿನ ಪರಿಶುದ್ಧ ಸ್ವರೂಪದಲ್ಲಿಯೇ ಇಂದಿನ ವರೆಗೆ ಉಳಿದುಬಂದಿದೆ.

ಇದು ಚಕ್ರವರ್ತಿ ಅಶೋಕ ನಡೆಸಿದ ಹಾಗೂ ಅಶೋಕನ ಧರ್ಮವಿಜಯದ ಕೇಂದ್ರಬಿಂದುವಾಗಿದ್ದ ಮೂರನೆಯ ಸಂಗೀತಿಯನ್ನು ವರ್ಣಿಸುತ್ತದೆ.  ಪ್ರಪಂಚಾದ್ಯಂತ ಪಶ್ಚಿಮದಲ್ಲಿ ಗ್ರೀಸ್ ಮತ್ತು ಈಜಿಪ್ಟಿನಿಂದ ಹಿಡಿದು ಪೂರ್ವದಲ್ಲಿ ಬರ್ಮ, ಕಾಂಬೋಡಿಯ ಮೊದಲಾದ ಆಗ್ನೇಯ ಏಷ್ಯಾದ ರಾಷ್ಟ್ರಗಳ ವರೆಗೆ, ಉತ್ತರದಲ್ಲಿನ ಕೆಲವು ಮಧ್ಯ ಏಷ್ಯ ರಾಷ್ಟ್ರಗಳಿಗೆ ಹಾಗೂ ದಕ್ಷಿಣದಲ್ಲಿ ಸಿಂಹಳಕ್ಕೆ - ಬೌದ್ಧಧರ್ಮದ ಬೆಳಕನ್ನು ಹೊತ್ತ ಭಾರತದ ಧರ್ಮದೀಪಕರನ್ನು ಬಹುಸಂಖ್ಯೆಯಲ್ಲಿ ಕಳುಹಿಸಲು ದಾರಿಮಾಡಿಕೊಟ್ಟಿದ್ದು ಈ ಪರಿಷತ್ತೇ.

ದೀಪವಂಶ ಸಿಂಹಳದ ಇತಿಹಾಸದ ಬಗೆಗಿನ ವಿವರಗಳನ್ನೂ ಒದಗಿಸುತ್ತದೆ ; ಮಹಾಸೇನನ ಕಾಲದವರೆಗೆ ಆಳಿದ ವಿವಿಧ ರಾಜರುಗಳ ಆಳ್ವಿಕೆಯನ್ನಿದು ವರ್ಣಿಸುತ್ತವೆ.  ಇನ್ನೂ ಹೆಚ್ಚು ಪ್ರಸಿದ್ಧವಾಗಿರುವ ಇತರ ಎರಡು ವೃತ್ತಾಂತಗಳಾದ ಮಹಾವಂಶ ಮತ್ತು ಚೂಲವಂಶಗಳು ವಾಸ್ತವವಾಗಿ ಈ ಕೃತಿಯ ವಾಖ್ಯಾನಗಳು ಅಥವಾ ವಿಸ್ತøತ ರೂಪಗಳು ಅಷ್ಟೆ. 															   (ಬಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ